ಬಕ್ರಿದ್
ಮುಸ್ಲಿಮರ ಅತಿ ದೊಡ್ಡ ಹಾಗೂ ಪವಿತ್ರ ಹಬ್ಬ (ಈದೇ ಕಬೀರ್). ಇದು ಅರಬ್ಬಿ ವರ್ಷದ ಕೊನೆಯ ತಿಂಗಳಾದ ಜಿಲ್‍ಹಜ್ಜ 9-10ನೆಯ ದಿವಸ ಬರುತ್ತದೆ. ಇದನ್ನು ಈದುಜ್ಜಹಾ (ಬಲಿದಾನ ಮಾಡುವ ಹಬ್ಬ) ಎಂದೂ ಕರೆಯುತ್ತಾರೆ. ತುರ್ಕಿ ಮತ್ತು ಈಜಿಪ್ಟ್‍ಗಳಲ್ಲಿ ಇದನ್ನು ಬೈರಾಂ ಎಂದೂ ಪರ್ಷಿಯಾ, ಇರಾನ್‍ಗಳಲ್ಲಿ ಈದ್-ಎ-ಖುರ್ಬಾನ್ ಎಂದೂ ಭಾರತದಲ್ಲಿ ಬಕ್ರೀದ್ ಎಂದೂ ಕರೆಯುತ್ತಾರೆ.

	ಇಸ್ಲಾಂ ಧರ್ಮದ ಉದಯದ ಮೊದಲಿಂದಲೆ ಈ ಹಬ್ಬದ ಆಚರಣೆ ನಡೆದು ಬಂದಿದೆ. ಇಸ್ಲಾಂನಲ್ಲಿ ಇದು ಹೇಗೆ ಸೇರಿತು, ಎಂಬ ವಿಚಾರದಲ್ಲಿ ಎರಡು ಅಭಿಪ್ರಾಯಗಳಿವೆ. ಪಾಶ್ಚಾತ್ಯ ಇತಿಹಾಸಕಾರರ ಪ್ರಕಾರ ಹಜರತ್ ಮೊಹಮ್ಮದ್ ಪೈಗಂಬರ್ ಮಕ್ಕಾದಿಂದ ಮದೀನಾಕ್ಕೆ ಬಂದು ನೆಲಸಿದಾಗ ಯಹೂದಿಗಳು ಜಿಲ್‍ಹಜ್ಜ; ಎಂಬ ಮಾಸದ ಹತ್ತನೆಯ ತಾರೀಖಿನಂದು ಪ್ರಾಯಶ್ಚಿತ್ತದ ರೂಪದಲ್ಲಿ ಉಪವಾಸ ಮಾಡುವುದನ್ನು ಕಂಡ. ಫಿರ್‍ಜಾನ್ ಎಂಬ ಈಜಿಪ್ಟಿನ ಅತ್ಯಾಚಾರಿ ಬಾದಷಹನ ಕೈಕೆಳಗೆ ಪೀಡೆಗೊಳಗಾದ ಮೂಸಾ ಮತ್ತು ಇಸ್ರೈಲುಗಳ ಮಕ್ಕಳ ಬಂಧವಿಮೋಚನೆಯಾದ ಪ್ರಯುಕ್ತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಂದು ತಿಳಿಯಿತು. ಯಹೂದಿಗಳು ಈ ಹಬ್ಬವನ್ನು ವಲ್ಹಾದನ್ ಎನ್ನುತ್ತಾರೆ. ಹಜರತ್ ಮೂಸಾರವರ ಮೇಲೆ ಯಹೂದಿಗಳಿಗಿಂತ ತಮ್ಮ ಅಧಿಕಾರ ಹೆಚ್ಚಿನದು ಎಂದು ಮೊಹಮ್ಮದ್ ಪೈಗಂಬರ್ ತಿಳಿಸಿದರಲ್ಲದೆ ಯಹೂದಿಗಳೊಂದಿಗೆ ತಾವೂ ಉಪವಾಸ ಮಾಡಿದುದಲ್ಲದೆ ತಮ್ಮ ಅನುಯಾಯಿಗಳಿಗೂ ಉಪವಾಸವನ್ನಾಚರಿಸುವುದಕ್ಕೆ ಆದೇಶವನ್ನಿತ್ತರು. ಆಮೇಲೆ ಯಹೂದಿಗಳಿಗೂ ಮುಸಲ್ಮಾನರಿಗೂ ಪರಸ್ಪರ ಕಲಹವುಂಟಾದುದರಿಂದ ಹಜರತ್ ಮೊಹಮ್ಮದ್ ಪೈಗಂಬರರು ಉಪವಾಸಕ್ಕೆ ಬದಲಾಗಿ ಬಲಿದಾನದ ಪದ್ದತಿಯನ್ನು ಜಾರಿಗೆ ತಂದರು. ಈ ರೀತಿ ಬ್ರಕೀದ್ ಹಬ್ಬ ಪ್ರಾರಂಭವಾಯಿತೆನ್ನಲಾಗಿದೆ.

	ಆದರೆ ಮುಸ್ಲಿಂ ಇತಿಹಾಸಕಾರರು ಮೇಲಿನ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಹಜರತ್ ಇಬ್ರಾಹೀಮನ ಕಾಲದಿಂದಲೂ ಈ ಹಬ್ಬ ನಡೆದುಬಂದಿದೆ ಎಂದು ಅವರು ವಾದಿಸುತ್ತಾರೆ. ಧರ್ಮಪ್ರವಾದಿಯಾದ ಹಜರತ್ ಇಬ್ರಾಹೀಮ್ ಖಲೀಲುಲ್ಲಾಹನ ಸತ್ತ್ವಪರೀಕ್ಷೆ ಮಾಡಲು ಅಲ್ಲಾ ಒಮ್ಮೆ ಅವನಿಗೆ “ನಿನ್ನ ಅತಿ ಪ್ರೀತ್ಯಾದರಗಳಿಗೆ ಪಾತ್ರವಾದ ಜೀವ ಒಂದನ್ನು ಬಲಿ ಕೊಡಬಲ್ಲೆಯಾ?” ಎಂದು ಕೇಳಿದ. ತನ್ನ ಏಕೈಕ ಪುತ್ರ ಇಸ್ಮಾಯಿಲ್ ಜಬಿಯುಲ್ಲಾಹನನ್ನೆ ಬಲಿದಾನ ಮಾಡಬೇಕೆಂಬುದು ಭಗವಂತನ ಇಚ್ಛೆ ಎಂದು ಅವನಿಗೆ ಮನವರಿಕೆಯಾಯಿತು. ಮಗನನ್ನು ಬಲಿಕೊಡಲು ಸಿದ್ಧನಾದ. ಆದರೆ ಅನೇಕ ಸಲ ಪ್ರಯತ್ನಪಟ್ಟರೂ ಮಗನ ಗಂಟಲಿನ ಮೇಲೆ ಕತ್ತಿ ಹರಿಯಲಿಲ್ಲ. ಇದನ್ನು ಕಂಡ ಮಗ `ಅಪ್ಪಾ ನಿನ್ನನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ. ಆದ್ದರಿಂದ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಕತ್ತಿ ಹರಿಸು ಎಂದಾಗ, ತಂದೆ ಹಾಗೆ ಮಾಡಲು ಕೂಡಲೆ ದೇವದೂತ ಗೇಬ್ರಿಯಲ್ ಬಂದು ಇಸ್ಮಾಯಿಲನನ್ನು ಒತ್ತಿ ಅವನ ಬದಲು ಒಂದು ಕುರಿಯನ್ನು ಇಡುತ್ತಾನೆ. ಇದು ಬಕ್ರೀದ್ ಹಬ್ಬದ ಹಿನ್ನಲೆ.

	ಒಟ್ಟಿನಲ್ಲಿ ಜೀವಜಂತುವಿನ ಬಲಿದಾನದ ಮೂಲಕ ಈ ಹಬ್ಬ ಆಚರಿಸಲ್ಪಡುತ್ತದೆ. ಬಲಿಯಾದ ಜಂತು ಮುಂದೆ ಪರೋಕ್ಷವಾಗಿ ಸಹಕಾರಿಯಾಗುತ್ತದೆ. ಪ್ರಪಂಚ ಕೊನೆಗೊಳ್ಳುವಾಗ ಒಂದು ದೊಡ್ಡ ಪ್ರಳಯವಾಗುತ್ತದೆ. ಇದನ್ನು ಖಯಾಮತ್ ಎನ್ನುವರು. ಆಗ ಮಾನವನ ಒಳ್ಳೆಯ ಹಾಗೂ ಕೆಟ್ಟ ನಡತೆಗಳ ತುಲಾಭಾರವಾಗುತ್ತದೆ. ಒಂದು ವೇಳೆ ಕೆಟ್ಟ ನಡತೆಗಳ ತಕ್ಕಡಿಯ ಭಾಗ ಭಾರವಾಗಿ ಕೆಳಗಿಳಿದರೆ, ಬಲಿ ಕೊಡಲ್ಪಟ್ಟ ಜಂತು ಕೂಡಲೇ ಬಂದು ಅತ್ತಕಡೆಯ ಭಾಗದಲ್ಲಿ ತನ್ನ ಭಾರವನ್ನು ಬಿಟ್ಟು ನೆರವು ನೀಡುತ್ತದೆ ಎಂಬುದಾಗಿ ನಂಬಿಕೆ. ಆದುದರಿಂದಲೆ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ, ಒಂಟೆಯನ್ನು ಹೆಚ್ಚು ಹೆಚ್ಚಾಗಿ ಬಲಿ ಕೊಡುತ್ತಾರೆ. ಇದನ್ನು ಖುರ್ಬಾನ್ ಎಂದು ಕರೆಯುತ್ತಾರೆ. ಇಬ್ರಾಹೀಮನ ಆ ದೈವಾಜ್ಞಾಪಾಲನೆಯ ನೆನಪನ್ನು ಬಲಿದಾನದ ಮೂಲಕ ಆಚರಿಸುತ್ತಾರೆ ಎನ್ನಬಹುದು.

	ಈ ಹಬ್ಬದ ದಿವಸ ಮುಸ್ಲಿಮರು ದಾನ (ಸದಕಾ) ಕೊಟ್ಟು ನಗರದ ಹೊರಗಿರುವ ಈದ್‍ಗಾಹ್ ಬಳಿ (ಪ್ರಾರ್ಥನಾಸ್ಥಳ) ಹೋಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ನಮಾಜು ಮಾಡಿ ಆದಮೇಲೆ ಅರಬ್ಬಿ ಹಾಗೂ ಉರ್ದು ಭಾಷೆಗಳಲ್ಲಿ ಇಮಾಮರು ಈ ಹಬ್ಬದ ಮಹತ್ತ್ವದ ಬಗ್ಗೆ ಉಪನ್ಯಾಸ ಮಾಡಿ ನೆರೆದ ಜನರಿಗೆ ಸದ್ಭೋದನೆ ಮಾಡುತ್ತಾರೆ.
(ಕೆ.ಎಮ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ